
ಭಾನುವಾರದ ಬಾಡೂಟಕ್ಕೆ ಸ್ಪೆಷಲ್ ಲೆಮನ್ ಪೆಪ್ಪರ್ ಚಿಕನ್ 🍋🌶️
ಚಪಾತಿ, ಅನ್ನದ ಜೊತೆ ಸೂಪರ್ ಕಾಂಬಿನೇಶನ್!
ಭಾನುವಾರ ಬಂದ್ರೆ ಮನೆಯಲ್ಲೊಂದು ವಿಭಿನ್ನವಾದ ಬಾಡೂಟ ಇರಬೇಕು ಅನ್ನೋದು ಎಲ್ಲರ ಆಸೆ. ಆದರೆ ಪ್ರತೀ ವಾರ ಅದೇ ಚಿಕನ್ ಕರ್ರಿ, ಫ್ರೈ ಅಥವಾ ಬಿರಿಯಾನಿ ಮಾಡಿಕೊಂಡು ಬೋರ್ ಆಗಿಬಿಡ್ತೀವಿ. “ಇವತ್ತು ಹೊಸದಾಗಿ ಏನಾದ್ರೂ ಮಾಡ್ಬೇಕಲ್ಲಾ?” ಅನ್ನೋ ಯೋಚನೆ ಬಂದಾಗ ಈ ಲೆಮನ್ ಪೆಪ್ಪರ್ ಚಿಕನ್ ನಿಮ್ಮ ಕೈ ಹಿಡಿದುಕೊಳ್ಳುತ್ತೆ.
ಇದು ಸಾಮಾನ್ಯ ಚಿಕನ್ ಕರ್ರಿಗಿಂತ ಸ್ವಲ್ಪ ವಿಭಿನ್ನ. ಹೆಚ್ಚು ಮಸಾಲೆ ಇಲ್ಲ, ಹೆಚ್ಚು ಎಣ್ಣೆ ಇಲ್ಲ, ಆದರೆ ರುಚಿಯಲ್ಲಿ ಯಾವ ಕಮ್ಮಿಯೂ ಇಲ್ಲ. ಲಿಂಬೆ ಹಣ್ಣಿನ ಸಿಟ್ರಸ್ ಟಚ್, ಕರಿಮೆಣಸಿನ ಖಾರ ಮತ್ತು ಸಿಂಪಲ್ ಭಾರತೀಯ ಮಸಾಲೆಗಳ ಮಿಶ್ರಣ ಈ ಚಿಕನ್‌ಗೆ ಅದ್ಭುತವಾದ ಫ್ಲೇವರ್ ಕೊಡುತ್ತೆ. ಸೆಮಿ ಗ್ರೇವಿ ಸ್ಟೈಲ್ ಆಗಿರುವುದರಿಂದ ಅನ್ನದ ಜೊತೆಗೂ, ಚಪಾತಿಯ ಜೊತೆಗೂ ಪರ್ಫೆಕ್ಟ್ ಆಗಿ ಹೊಂದುತ್ತೆ.
ಬಾಯಲ್ಲಿ ಕರಗಿ ಹೋಗುವಷ್ಟು ಸಾಫ್ಟ್ ಆಗಿರುವ ಚಿಕನ್, ಘಮಘಮಿಸುವ ವಾಸನೆ, ಖಾರ–ಹುಳಿ ಕಾಂಬಿನೇಶನ್… ಈ ಎಲ್ಲ ಕಾರಣಗಳಿಂದ ಮಕ್ಕಳು, ಮನೆಮಂದಿ ಎಲ್ಲರೂ ಈ ಡಿಶ್‌ಗೆ ಫ್ಯಾನ್ ಆಗಿಬಿಡ್ತಾರೆ. ವಿಶೇಷವಾಗಿ ಭಾನುವಾರದ ಬಾಡೂಟದಲ್ಲಿ ಇದನ್ನು ಮಾಡಿದ್ರೆ “ಇದು ತುಂಬಾ ಟೇಸ್ಟ್ ಇದೆ” ಅನ್ನೋ ಮಾತು ಕೇಳೋದು ಗ್ಯಾರಂಟಿ.
ನಿಮ್ಮ ಬಾಡೂಟ ಸ್ಪೆಷಲ್ ಆಗಬೇಕು ಅಂದ್ರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ಈಗ ಸಂಪೂರ್ಣ ವಿಧಾನವನ್ನು ಹಂತ ಹಂತವಾಗಿ ನೋಡೋಣ.
ಬೇಕಾದ ವಸ್ತುಗಳು
-
ಅರ್ಧ ಕೆಜಿ ಚಿಕನ್ 1 ಕಪ್ ಮೊಸರು ಅರಶಿನ ಪುಡಿ – ½ ಟೀ ಸ್ಪೂನ್ ಕರಿಮೆಣಸು ಪುಡಿ – 1 ಟೀ ಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಲಿಂಬೆ ಹಣ್ಣು – 2 ಬೆಳ್ಳುಳ್ಳಿ – 6 ಎಸಳು
-
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್ ಈರುಳ್ಳಿ – 1 (ಸಣ್ಣಗೆ ಹೆಚ್ಚಿದ) ಕ್ಯಾಪ್ಸಿಕಂ – 1 (ಸ್ಲೈಸ್ ಮಾಡಿದ) ಹಸಿಮೆಣಸಿನಕಾಯಿ – 5 ಜೀರಿಗೆ ಪುಡಿ – ½ ಟೀ ಸ್ಪೂನ್
-
ಗರಂ ಮಸಾಲ ಪುಡಿ – ½ ಟೀ ಸ್ಪೂನ್ ಕಾರ್ನ್ ಫ್ಲೋರ್ / ಜೋಳದ ಹಿಟ್ಟು – 1 ಸ್ಪೂನ್ ಅಡುಗೆ ಎಣ್ಣೆ – ಅಗತ್ಯವಿರುವಷ್ಟು ಕರಿಬೇವು ಸೊಪ್ಪು – ಸ್ವಲ್ಪ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
🍗 ಮ್ಯಾರಿನೇಷನ್ ಮಾಡುವ ವಿಧಾನ
ಮೊದಲು ಚಿಕನ್ ಅನ್ನು ಚೆನ್ನಾಗಿ ಕ್ಲೀನ್ ಮಾಡಿ ನೀರಿನಲ್ಲಿ ತೊಳೆದುಕೊಳ್ಳಿ. ನೀರು ಸಂಪೂರ್ಣವಾಗಿ ಇಳಿದ ನಂತರ ಒಂದು ಬೌಲ್‌ಗೆ ಚಿಕನ್ ಹಾಕಿ.
ಅದಕ್ಕೆ ಮೊಸರು, ಅರಶಿನ ಪುಡಿ, ಕರಿಮೆಣಸು ಪುಡಿ, ಉಪ್ಪು ಮತ್ತು ಒಂದು ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಕನಿಷ್ಠ ಅರ್ಧ ಗಂಟೆ ಮ್ಯಾರಿನೇಟ್ ಆಗಲು ಬಿಡಿ. ಮ್ಯಾರಿನೇಷನ್ ಚೆನ್ನಾಗಿದ್ದಷ್ಟು ಚಿಕನ್ ಇನ್ನೂ ಸಾಫ್ಟ್ ಮತ್ತು ರುಚಿಯಾಗಿರುತ್ತದೆ.
🔪 ಮುಂಚಿತವಾಗಿ ತಯಾರಿಸಿಕೊಳ್ಳಿ
ಚಿಕನ್ ಮ್ಯಾರಿನೇಟ್ ಆಗುವಷ್ಟರಲ್ಲಿ: ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿಕೊಳ್ಳಿ
-
ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಬೇರೆ ಬೇರೆ ರೆಡಿ ಮಾಡಿಕೊಂಡಿರಿ ಇದರಿಂದ ಅಡುಗೆ ಮಾಡುವಾಗ ಸುಲಭವಾಗುತ್ತದೆ.
🍳 ಲೆಮನ್ ಪೆಪ್ಪರ್ ಚಿಕನ್ ಮಾಡುವ ವಿಧಾನ
ಒಂದು ದಪ್ಪ ತಳದ ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ. ಈರುಳ್ಳಿ ಸ್ವಲ್ಪ ಗೋಲ್ಡನ್ ಕಲರ್ ಬರೋವರೆಗೂ ಹುರಿದುಕೊಳ್ಳಿ.
ಈಗ ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿ ಸೇರಿಸಿ. ಮೀಡಿಯಂ ಫ್ಲೇಮ್‌ನಲ್ಲಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ. ನಂತರ 2 ಸ್ಪೂನ್ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಈಗ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಕಲಸಿ, ಪಾತ್ರೆಗೆ ಮುಚ್ಚಳ ಹಾಕಿ ಬೇಯಿಸಿ. ಈ ಹಂತದಲ್ಲಿ ನೀರು ಸೇರಿಸುವ ಅಗತ್ಯವಿಲ್ಲ.
ಚಿಕನ್ ಸ್ವಲ್ಪ ಬೇಯಲು ಆರಂಭಿಸಿದಾಗ ಜೀರಿಗೆ ಪುಡಿ ಮತ್ತು ಗರಂ ಮಸಾಲ ಪುಡಿ ಸೇರಿಸಿ.
ಒಂದು ಕಪ್ ನೀರಿಗೆ ಕಾರ್ನ್ ಫ್ಲೋರ್ ಅಥವಾ ಜೋಳದ ಹಿಟ್ಟು ಮಿಕ್ಸ್ ಮಾಡಿ, ಈ ಮಿಶ್ರಣವನ್ನು ಚಿಕನ್‌ಗೆ ಸೇರಿಸಿ ಸೆಮಿ ಗ್ರೇವಿ ಬರೋವರೆಗೂ ಬೇಯಿಸಿ.
ಕೊನೆಗೆ ಮತ್ತೊಂದು ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಚಿಕನ್ ಸಂಪೂರ್ಣವಾಗಿ ಬೆಂದ ನಂತರ ಕರಿಬೇವು ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.
✨ ರುಚಿಯಾದ ಸ್ಪೆಷಲ್ ಲೆಮನ್ ಪೆಪ್ಪರ್ ಚಿಕನ್ ರೆಡಿ!
🍽️ ಯಾವದ್ರ ಜೊತೆ ಬೆಸ್ಟ್?
ಈ ಲೆಮನ್ ಪೆಪ್ಪರ್ ಚಿಕನ್ ಅನ್ನು
-
ಬಿಸಿ ಬಿಸಿ ಅನ್ನ
-
ಚಪಾತಿ
-
ಪರೋಟ
-
ದೋಸೆ
ಯಾವುದರ ಜೊತೆ ತಿಂದ್ರೂ ಸಖತ್ ಟೇಸ್ಟ್ ಆಗಿರುತ್ತದೆ. ಸೆಮಿ ಗ್ರೇವಿ ಸ್ಟೈಲ್ ಆಗಿರುವುದರಿಂದ ಅನ್ನದ ಜೊತೆ ಇದ್ರ ರುಚಿ ಇನ್ನೂ ಡಬಲ್.
